ಅಪಾಯಕರ ವೃತ್ತಿಗಳು

	ಕೆಲಸಗಾರರ ಆರೋಗ್ಯವನ್ನು ಕುಂದಿಸುವ ವೃತ್ತಿಗಳನ್ನು ಈ ಗುಂಪಿಗೆ ಸೇರಿಸಲಾಗಿದೆ. ಆ ಕೂಡಲೆ ಅಥವಾ ಕ್ರಮೇಣ ಹಾಳುಮಾಡಬಲ್ಲ ಯಂತ್ರ ನಡೆಸುವಾಗಲೋ ಬೇರೆಯಾಗೋ ಅಪಾಯ ಒದಗುವುದು. ಎಲ್ಲ ವೃತ್ತಿಗಳಿಗೂ ಸಾಧಾರಣವಾಗಿರುವ ಅಂಶವಾದ್ದರಿಂದ ಅದನ್ನಿಲ್ಲಿ ಸೇರಿಸಿಲ್ಲ (ನೋಡಿ- ಕೈಗಾರಿಕಾ-ವೈದ್ಯ). ಮುಖ್ಯವಾಗಿ ಕೆಲಸಗಾರನ ಉದ್ಯೋಗದಲ್ಲಿ ರಾಸಾಯನಿಕಗಳು, ಧೂಳುಗಳು, ಕೆಲವು ಭೌತಿಕ ಕಾರಕಗಳು, ರೋಗಾಣುಗಳು - ಮೊದಲಾದವುಗಳಿಂದ ಬರುವ ರೋಗಗಳನ್ನು ಮಾತ್ರ ಇಲ್ಲಿ ಹೇಳಿದೆ.

	ಮಾನವ ಕೈಗೊಳ್ಳುವ ಬಹುಪಾಲು ಎಲ್ಲ ಕೆಲಸಗಳಲ್ಲೂ ಅಪಾಯ ಇದ್ದೇ ಇರುತ್ತದೆ. ಮನೆಯಲ್ಲಿನ ಹೆಂಗಸು ದಿನವೂ ನೋವು, ನರಳಿಕೆಗಳನ್ನು ಅನುಭವಿಸಬೇಕಾಗಬಹುದು. ಸೌದೆ ಒಲೆಯ ಕೆಂಡ, ಉರಿಗೊಳ್ಳಿಗಳನ್ನು ತಳ್ಳುವಾಗ, ಬಿಸಿ ಪಾತ್ರೆಗಳನ್ನು ಮುಟ್ಟುವಾಗ ಕೈ ಸುಡಬಹುದು. ಖಾರದ ಹಸಿ ಮೆಣಸಿನ ಕಾಯನ್ನು ಹೆಚ್ಚಿದ ಮೇಲೋ ಆಗಾಗ್ಗೆ ಸಾಬೂನು, ಕೃತಕಚೊಕ್ಕಕಾರಕಗಳು (ಡಿಟರ್ಜೆಂಟ್ಸ್) ಪುಡಿಗಳಿಂದ ತೊಳೆವಾಗಲೋ ಏಳುವ ಚರ್ಮದ ಉರಿ, ಬೇನೆ ಇತ್ಯಾದಿ ಉದಾಹರಣೆಗಳು. ಸಾಮಾನ್ಯವಾಗಿ ಸಂಪಾದನೆಗಾಗಿ ದುಡಿದ ಕೆಲಸಕ್ಕೆ ಉದ್ಯೋಗ, ವೃತ್ತಿ ಎಂದಿದೆ.

	ಕೆಲವು ಗಣಿಗಳ ವಿಷಗಾಳಿ ಪ್ರಾಣಾಪಾಯವೆಂದು ತಿಳಿದಿದ್ದರೂ ರೋಮ್‍ನ ಉನ್ನತಿಯ ಕಾಲದಲ್ಲಿ ಗುಲಾಮರೂ ರಾಜಕೀಯ ಖೈದಿಗಳೂ ಆಳದ ಗಣಿಗಳಲ್ಲಿ ದುಡಿಯಬೇಕಿತ್ತು. ಕೈಗಾರಿಕಾ ಕ್ಷೇತ್ರದ ಹಿರಿಯ ವೈದ್ಯ ಎನಿಸಿಕೊಂಡ ಇಟಲಿಯ ಬರ್ನಾರ್ಡಿನೊ ರಾಮಜ್ಜಿನಿ (1663-1714) ಕೆಲಸಗಾರರ ಆರೋಗ್ಯಪಾಲನೆಯಲ್ಲಿ ವೈದ್ಯವಿಜ್ಞಾನದ ಪಾತ್ರವನ್ನು ಮೊದಮೊದಲು ವಿವರಿಸಿದ. 18, 19ನೆಯ ಶತಮಾನದ ಇಂಗ್ಲೆಂಡಿನಲ್ಲಿ ಹೊಗೆಕೊಳವೆಗಳನ್ನು ಮಕ್ಕಳಿಂದ ಚೊಕ್ಕ ಮಾಡಿಸುವ ಕ್ರೂರವರ್ತನೆಯನ್ನು ಬ್ಲೇಕ್, ಲ್ಯಾಂಬ್, ಡಿಕನ್ಸ್ ಮೊದಲಾದವರು ಬಲು ಖಂಡಿಸಿದರು. ಹೊಗೆಕೊಳವೆಗಳ ಒಳಗೆ ಅಂಟಿರುವ ರಾಸಾಯನಿಕಗಳು ಮಕ್ಕಳಿಗೆ ತಾಕಿ ಚರ್ಮದ ಏಡಿಗಂತಿಗೆ ತುತ್ತಾಗುತ್ತಿದ್ದರು. 20ನೆಯ ಶತಮಾನದ ಮೊದಲಲ್ಲಿ ಅಮೆರಿಕದ ಅಲೀಸ್ ಹ್ಯಾಮಿಲ್ಟನ್, ಕೆಲಸಗಾರರ ರೋಗಕ್ಕೂ ಅವರ ದುಡಿಮೆಯಲ್ಲಿ ಏಳುತ್ತಿದ್ದ ವಿಷವಸ್ತುಗಳಿಗೂ ಇರುವ ಸಂಬಂಧವನ್ನು ತೋರಿ, ವೃತ್ತಿಗಳಿಂದೇಳುವ ರೋಗಗಳ ಕಡೆ ಎಲ್ಲರ ಗಮನವನ್ನೂ ಸೆಳೆದಳು. ಆದರೆ ಅಂದಿನ ಅಮೆರಿಕದ ವೈದ್ಯರಿಗೆ ಈ ವಿಚಾರದಲ್ಲಿ ಏನೇನೂ ಆಸಕ್ತಿ ಹುಟ್ಟಲಿಲ್ಲ. 1901ರ ಬ್ರಿಟಿಷ್ ಕಾರ್ಖಾನೆಗಳ ಹಾಗೂ ಕಾರ್ಯಾಗಾರಗಳ ಶಾಸನ ಈ ಉದ್ಯಮಗಳನ್ನು ಅಪಾಯಕರ ಉದ್ಯಮಗಳೆಂದು ಘೋಷಿಸಿತು. ಸೀಸ, ರಂಜಕ, ಹರಿದಳ (ಅರ್ಸೆನಿಕ್), ಪಾದರಸ ಮುಂತಾದ ಅಪಾಯಕಾರಿ ವಸ್ತುಗಳನ್ನು ಬಳಸುವ ಸಂಸ್ಥೆಗಳು ತತ್ಸಂಬಂಧವಾಗಿ ಬರುವ ವ್ರಣ, ಪೀಡೆಗಳನ್ನು ಸರಕಾರದ ಗೃಹಕಚೇರಿಯಲ್ಲಿ ಕಾರ್ಖಾನೆಗಳ ಪ್ರಧಾನ ತನಿಖೆ ಅಧಿಕಾರಗಳಿಗೆ ವರದಿ ಮಾಡಬೇಕೆಂದು ನಿಗಧಿಮಾಡಿತು. ಈ ಶಾಸನ ಜಾರಿಗೆ ಬಂದಮೇಲೆ ಕೈಗಾರಿಕಾ ಕಾಯಿಲೆಗಳ ತಪಶೀಲೊಂದನ್ನು ತಯಾರಿಸಲಾಯಿತು. ಕೈಗಾರಿಕಾ ಶಾಸನದಲ್ಲಿ ಇದೊಂದು ಮುಖ್ಯ ಹಾಗೂ ದಯಾಪರ ಪ್ರಗತಿಯಾಯಿತು.

	ಭಾರತದಲ್ಲಿ ಈ ಅಪಾಯಕರ ವೃತ್ತಿಗಳಲ್ಲಿನ ಕೆಲಸಗಾರರು ಸುಮಾರು ಹತ್ತು ದಶಲಕ್ಷ ಮಂದಿ. ದಾಖಲೆಗಳಿಲ್ಲದ ಸಣ್ಣಪುಟ್ಟ ಕೈಗಾರಿಕೆಗಳು ಇದರಲ್ಲಿ ಸೇರಿಲ್ಲವಾದ್ದರಿಂದ ಈ ಅಂದಾಜು ಕಡಿಮೆಯೇ. ಇವೂ ಸೇರಿದರೆ ಮತ್ತೊಂದು ದಶಲಕ್ಷ ಮಂದಿ ಆಗಬಹುದು. ಭಾರತದಲ್ಲಿ ಕೈಗಾರಿಕೆಗಳು ಹುಟ್ಟಿಕೊಂಡ ಹಾಗೆಲ್ಲ ಇನ್ನಷ್ಟು ಮತ್ತಷ್ಟು ಮಂದಿ ಕೆಲಸಗಾರರಾಗಿ ಸೇರಿಕೊಳ್ಳುತ್ತಿರುವರು. ನೂರಕ್ಕೆ ಎಂಭತ್ತು ಮಂದಿಯಂತಿರುವ ಹಳ್ಳಿವಾಸಿಗಳೇ ಪಟ್ಟಣಗಳ ಕಾರ್ಖಾನೆಗಳಲ್ಲಿ ಕೆಲಸಕ್ಕೆ ಬಂದಾಗ ಜಾಗ, ವಸತಿಗಳಲ್ಲಿ ಮಾತ್ರವಲ್ಲದೆ, ಅವರ ಜೀವನ ಕ್ರಮಗಳೂ ಬದಲಾಗಿ ಮನಸ್ಸಿನ ನಿಟ್ಟೂ ಬೇರೆಯಾಗುತ್ತದೆ. 1948ರ ಕಾರ್ಖಾನೆಗಳ ಶಾಸನದಲ್ಲಿ ಈ ಬಗ್ಗೆ ನಿಬಂಧನೆಗಳನ್ನು 87ರಿಂದ 91ರ ವರೆಗಿನ ವಿಧಿಗಳಲ್ಲಿ ನಮೂದಿಸಿದೆ. 87ನೆಯ ವಿಧಿ ಅಪಾಯಕರ ಕಾರ್ಯವಿಧಾನಗಳನ್ನು ಕುರಿತದ್ದು. ಯಾವ ಕಾರ್ಯವಿಧಾನವನ್ನೇ ಆಗಲಿ ಅಪಾಯಕಾರಿಯೆಂದು ಘೋಷಿಸಿ, ಈ ಬಗ್ಗೆ ಸೂಕ್ತ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಕಾರ್ಖಾನೆಗಳಿಗೆ ತಿಳಿಸಲು ರಾಜ್ಯಸರ್ಕಾರಕ್ಕೆ ಅಧಿಕಾರ ಕೊಟ್ಟಿದೆ. ಅಪಘಾತಗಳು ಹಾಗೂ ಕಾಯಿಲೆಗಳನ್ನು ಕುರಿತ ತಿಳಿವಳಿಕೆ ಹಾಗೂ ಈ ಪ್ರಕರಣಗಳನ್ನು ಕುರಿತ ನೇರ ವಿಚಾರಣೆಯನ್ನು ನಿರ್ದೇಶಿಸುವ ಅಧಿಕಾರ - ಇವನ್ನು ಕುರಿತ ವಿವರಗಳು ಉಳಿದ ವಿಧಿಗಳಲ್ಲಿವೆ. ಪ್ರಕಟಿಸಬೇಕಾದ ರೋಗಗಳ ಒಂದು ಪಟ್ಟಿಯೂ ಇದೆ. ಹೀಗೆ ಅಪಾಯಕರ ಉದ್ಯಮ ಹಾಗೂ ಅಪಾಯಕರ ಕಾರ್ಯವಿಧಾನಗಳ ವಿರುದ್ಧವಾಗಿ ಮುನ್ನೆಚ್ಚರಿಕೆಗೆ ಸಂಬಂಧಿಸಿದಂತೆ 1948ರ ಕಾರ್ಖಾನೆಗಳ ಶಾಸನಗಳಲ್ಲಿ ಭಾರತ ಸರ್ಕಾರ ಸಾಕಷ್ಟು ಕಟ್ಟುಪಾಡುಗಳನ್ನು ಮಾಡಿದೆ. ಆದರೂ ಹೊಸ ಕೈಗಾರಿಕೆಗಳಲ್ಲಿ ನಮ್ಮವರಿಗೆ ಆಗುವ ಕೆಡುಕುಗಳ ವಿಚಾರದ ತಿಳಿವಳಿಕೆ ಇನ್ನೂ ಏನೇನೂ ಸಾಲದು. ಖಚಿತ ಅಂಕಿಅಂಶಗಳೂ ಇಲ್ಲ.

	ಪ್ರಪಂಚದಲ್ಲಿ ವೃತ್ತಿಗಳಿಂದೇಳುವ ಅಪಾಯಗಳಿಗೆ ಈಡಾಗುವುದರಲ್ಲಿ ಕೆಲಸಗಾರರಲ್ಲೇ ಎಷ್ಟೋ ವ್ಯತ್ಯಾಸಗಳಿವೆ. ಕೈಗಾರಿಕೆ ಉದ್ಯಮಗಳಲ್ಲಿ ಮುಂದುವರಿದ ರಾಷ್ಟ್ರಗಳ ಜನನಿಬಿಡ ಪಟ್ಟಣಗಳು ಒಂದು ಗುಂಪಾದರೆ ಕೇವಲ ಬೇಸಾಯವೇ ಆಧಾರವಾದ ಸಣ್ಣ ಹಳ್ಳಿಗಳದು ಮತ್ತೊಂದು ಗುಂಪು. ಪ್ರಪಂಚದ ಎಲ್ಲೆಡೆಗಳಲ್ಲೂ ಮಾನವನಿಂದಾದ ರೋಗಗಳ ವಿಚಾರದಲ್ಲಿ ತಿಳಿವಳಿಕೆ ಸಾಲದು. ವರದಿಗಳೂ ಸಾಕಷ್ಟಿಲ್ಲ. ಅಮೆರಿಕದ ಒಂದೊಂದೂ ಸಂಸ್ಥಾನವೂ ಕೈಗಾರಿಕೆಗಳಲ್ಲಿನ ಅಪಾಯಗಳ ತಪಶೀಲನ್ನು ಹಲತೆರನಾಗಿ ಪಟ್ಟಿ ಹಾಕುವುದು, ಸರ್ಕಾರಗಳು ಕಾರ್ಖಾನೆಗಳನ್ನು ಆಗಾಗ್ಗೆ ಪರಿಶೀಲಿಸುತ್ತಿದ್ದುದರಿಂದ ಸ್ವೀಡನ್, ಬ್ರಿಟನ್, ಎರಡನೆಯ ಮಹಾಯುದ್ಧದ ಮೊದಲಿನ ಜರ್ಮನಿಗಳ ಅಂಕಿಅಂಶಗಳು ನಂಬುವಂತಿವೆ.

	ಬ್ರಿಟನ್ನಿನಲ್ಲಿ ಕೇವಲ ನೂರಕ್ಕೆ ಹತ್ತು ರೋಗಗಳಿಗೆ ಅಪಾಯಕರ ವೃತ್ತಿಗಳು ಕಾರಣವೆಂದು ಅಂದಾಜಾಗಿದೆ. 1951ರಲ್ಲಿ ಬ್ರಿಟನ್ನಿನ ರಾಷ್ಟ್ರೀಯ ವಿಮಾಶಾಸನ 7,000,000 ಬಾರಿ ರೋಗ ತಾಕಿದ್ದನ್ನು ವರದಿ ಮಾಡಿದೆ. ಅದೇ ವರ್ಷದಲ್ಲಿ ಆಕಸ್ಮಿಕ ಪೆಟ್ಟು, ಗಾಯ ಇತ್ಯಾದಿಗಳಿಗೆ 720,000 ಹೊಸ ಪರಿಹಾರಗಳನ್ನೂ ಅಪಾಯಕರ ವೃತ್ತಿಯಿಂದ ಆದವಕ್ಕೆ ಕೇವಲ 50,000 ಪರಿಹಾರಗಳನ್ನೂ ಕೊಟ್ಟಿತು. ಆಳದ ಗಣಿಗಳಲ್ಲಿ ಸಿಡಿದು ಅನೇಕರು ಬಲಿಯಾದರೆ ಎಲ್ಲರೂ ಗಮನಿಸುವರು. ಆದರೆ, ಅಪಾಯಕರ ವೃತ್ತಿಯಿಂದ ನಿಧಾನವಾಗಿ ತೋರಿಬರುವ ಕೆಲವೇ ರೋಗಗಳನ್ನು ಯಾರೂ ಅಷ್ಟಾಗಿ ಗಮನಿಸರು.

	ರಾಸಾಯನಿಕಗಳು, ದೂಳು, ವಿಷಗಾಳಿಗಳಿಂದಲೇ ಗೊತ್ತಾದ ಒಂದು ರೋಗ ಏಳುವುದೆಂದು ನಿಖರವಾಗಿ ಹೇಳಲು ಅನೇಕ ಪ್ರಯೋಗಗಳು ಆಗಬೇಕು. ನಿರ್ಧರಿಸಲೂ ವರ್ಷಗಳೇ ಹಿಡಿಯಬಹುದು. ಈ ವಿಚಾರಗಳ ತಿಳಿವಿಗೂ ಮಿತಿಯಿದೆ. ಕೆಲಸಗಾರನ ರೋಗಕ್ಕೆ ಅವನ ವೃತ್ತಿಯೇ ಕಾರಣವೆಂದು ಖಚಿತ ಪಡಿಸುವುದು ವೈದ್ಯರಿಗೂ ಕಷ್ಟ. ಎಷ್ಟೋ ವೇಳೆ ಇತರ ಅನೇಕ ರೋಗಗಳ ಚಿಹ್ನೆ, ಲಕ್ಷಣಗಳು ವೃತ್ತಿಯಿಂದ ಆದ ಹಾಗೇ ಇರುತ್ತವೆ. ಒಬ್ಬ ಕೆಲಸಗಾರ ತುಸು ವಿಷಕರ ರಾಸಾಯನಿಕವನ್ನು ಎಡಬಿಡದೆ ತಾಕಿಸಿಕೊಂಡೇ ದುಡಿಯುತ್ತಿದ್ದರೆ ಆಗುವ ಕೆಡುಕುಗಳ ವಿಚಾರ ಹೆಚ್ಚಾಗಿ ತಿಳಿದಿಲ್ಲ. ಹಲವೇಳೆ, ವೃತ್ತಿಯಿಂದಲೇ ಒಂದು ರೋಗ ಬಂದಿರುವುದು ತಿಳಿದಿದ್ದರೂ ಅದು ರುಜುವಾತಾಗುವ ವಿಜ್ಞಾನದ ಪರೀಕ್ಷೆಗಳಿಲ್ಲ. ವೃತ್ತಿಯಿಂದ ಏಳುವ ಬೇನೆ ಚೆನ್ನಾಗಿ ಬಲಿತ ಹೊರತು ಗೊತ್ತಾಗದೆ ಇರಬಹುದು. ಕಬ್ಬಿಣ, ಬಿಳಿ ಜೇಡಿ, ತವರ, ಅಚ್ಚ ಇಂಗಾಲಗಳಂಥ ಕೆಡುಕಾಗಿಸದ ಹಲವು ದೂಳುಗಳೂ ಪುಪ್ಪುಸಗಳಲ್ಲಿ ಸಾಕಷ್ಟು ಕೂಡಿದ್ದರೆ, ಕ್ಷ-ಕಿರಣಗಳಿಂದ ಕಂಡುಕೊಳ್ಳಬಹುದು.

	ಅನುಭವ, ತಿಳಿವಳಿಕೆಗಳಿಂದ ಅಪಾಯಕರ ವೃತ್ತಿಗಳನ್ನೂ ಕೆಡುಕಿಲ್ಲದಂತೆ ಮಾಡಬಹುದು. ವಿಷಕರ ರಾಸಾಯನಿಕಗಳ ಬದಲು ವಿಷವಿರದವನ್ನು ಬಳಸಬೇಕು. ಈ ತತ್ತ್ವದ ಆಚರಣೆ ಬೆಂಕಿಕಡ್ಡಿ ತಯಾರಿಕೆಯಲ್ಲಿದೆ. ಹಿಂದೆ ಬೆಂಕಿಕಡ್ಡಿ ಕಾರ್ಖಾನೆ ಕೆಲಸಗಾರರು ಬಿಳಿಯ ಇಲ್ಲವೇ ಹಳದಿಯ ರಂಜಕವನ್ನು ಬಳಸುತ್ತಿದ್ದಾಗ, ಅದರ ಆವಿ ಉಸಿರಲ್ಲಿ ಸೇರುತ್ತಿದ್ದುದರಿಂದ ದವಡೆಯ ಹಲ್ಲುಗೂಡುಗಳಲ್ಲಿ ಕೀವುಗೂಡಿ ಕೊಳೆತು ಸಾಯುತ್ತಿದ್ದರು. ಇದರ ಬದಲಾಗಿ ಕೆಂಪು ರಂಜಕದ ಬಳಕೆ ಕಡ್ಡಾಯದ ಕಾಯಿದೆ (1908) ಆಗಿ, ಈಗ ಇನ್ನೂ ನಿರಪಾಯಕರ ಸೆಸ್ ಕ್ವಿ ಸಲ್ಫೈಡ್ ಲವಣವನ್ನು ಬಳಸಿದಾಗಿಂದ ಈ ದವಡೆಕೊಳೆತ ನಿಂತಿತು. ಹೀಗೆ ಬದಲು ಮಾಡಲಾಗದಿದ್ದರೆ, ವಿಷವಸ್ತು ಗಾಳಿಯಲ್ಲಿ ಬರದಂತೆ ಆವರಣದ ಅಡ್ಡಿ ಹಾಕಬಹುದು. ಕೆಲಸ ಮಾಡುವೆಡೆಯಲ್ಲಿ ಗಾಳಿಯಾಟ ಹೆಚ್ಚಿಸಿ, ಒಳ್ಳೆಯ ಗಾಳಿ ಬರುವಂತೆ ಮಾಡಬಹುದು. ಇವಾವೂ ಆಗದಿದ್ದಲ್ಲಿ ಕಟ್ಟಕಡೆಯ ಉಪಾಯವಾಗಿ, ಕೆಲಸದ ಹೊತ್ತಿನಲ್ಲಿ ಕೆಲಸಗಾರರಿಗೆಲ್ಲ ಉಸಿರಾಟಕ (ರೆಸ್ಪಿರೇಟರ್), ಕನ್ನಡಕ, ಕೈಗವುಸು, ಮುಂಗವಚ-ಇತ್ಯಾದಿಗಳನ್ನು ಒದಗಿಸಬಹುದು. ಅಪಾಯಗಳನ್ನು ತಡೆಯಲು ಆಗೇ ಆಗದು ಎನ್ನುವೆಡೆಯಲ್ಲಿ ಆದಷ್ಟೂ ಯಂತ್ರಸಾಧನಗಳ ನೆರವನ್ನೇ ಪಡೆಯಬೇಕಾಗಬಹುದು.

	ವಿಷಕರ ರಾಸಾಯನಿಕಗಳು: ಉಸಿರಿನ ಮೂಲಕ ಪುಪ್ಪುಸಗಳನ್ನೂ ಆಹಾರದೊಂದಿಗೆ ಜಠರ, ಕರುಳುಗಳನ್ನೂ ಚರ್ಮದ ಮೂಲಕ ಮೈ ಒಳಗೂ ವಿಷಕರ ರಾಸಾಯನಿಕಗಳು ಹೋಗಬಹುದು. ಇವುಗಳ ಪರಿಣಾಮಗಳೂ ಹಲತೆರ. ಚರ್ಮ, ಗಂಟಲು, ಉಸಿರ್ನಾಳ, ಪುಪ್ಪುಸ, ಜಠರ ಕರುಳುಗಳಲ್ಲಿ ನೇರ ಬದಲಾವಣೆಗಳು ಆಗಬಹುದು. ಈ ವಿಷಕಾರಕಗಳು ರಕ್ತವನ್ನು ಸೇರಿದರೆ ಅಂಗಾಂಗಗಳಲ್ಲಿ ರೋಗತೋರಬಹುದು. ಕೆಲವು ವೇಳೆ, ಚರ್ಮ, ಪುಪ್ಪುಸಗಳಲ್ಲಿ ಒಗ್ಗದಿಕೆಯ (ಅಲರ್ಜಿ) ತುರುಚೆ ದದ್ದುಗಳು, ಗುರಲು ಇತ್ಯಾದಿ ಆಗಬಹುದು. ಅಲ್ಲದೆ, ಅಂಗಗಳ ಬಲ ಕುಗ್ಗಿಸಿ ಕ್ಷಯ, ಏಡಿಗಂತಿ, ಚರ್ಮದ ಉರಿತ (ಡರ್ಮಟೈಟಿಸ್) ಇತ್ಯಾದಿ ಬೇರೆರೋಗಗಳಿಗೆ ಈಡಾಗಿಸಲೂಬಹುದು. ಕೆಟ್ಟ ನಾತದಿಂದ ಮನಸ್ಸು ಕೆಡುವುದೂ ಉಂಟು. ಪರಿಣಾಮಗಳ ಏರುಪೇರು ರಾಸಾಯನಿಕದ ಕೆಲವು ಲಕ್ಷಣಗಳನ್ನು ಅವಲಂಬಿಸಿದೆ. ಗಾಳಿಯಲ್ಲಿ ಅವುಗಳ ಸಾಂದ್ರತೆ, ಗಾತ್ರ ಇತ್ಯಾದಿ, ಕೆಲಸಗಾರನ ಪುಷ್ಟಿ, ವಿಷ ತಾಕಿರುವ ಅವಧಿ, ಇವು ಮುಖ್ಯ. ರೋಗವನ್ನು ಎಬ್ಬಿಸಲು ಒಂದೊಂದು ವಿಷಕರ ರಾಸಾಯನಿಕದ ಸಾಂದ್ರತೆಯನ್ನು ನಿರ್ಧರಿಸುವ ಯತ್ನಗಳಾಗಿವೆ. ಆಗಲೇ ಕೆಲವದರ ಸಾಂದ್ರತೆ ಗೊತ್ತಾಗಿದೆ.

	ಸಿಡಿಮದ್ದುಗಳು, ಬಾಣ ಬಿರುಸುಗಳ ತಯಾರಿಕೆಯಲ್ಲಿ ಮಾಡುವ ರೀತಿಯಲ್ಲಿ ಎಚ್ಚರ ತಪ್ಪಿದರೆ ಅನಾಹುತ ಆಗುವುದು ಎಲ್ಲರಿಗೂ ಗೊತ್ತು. ಇದಕ್ಕಾಗಿ ಸಿಡಿತ, ಉರಿಗಳೇಳದಂತೆ ಸಾಕಷ್ಟು ಮುನ್ನೆಚ್ಚರದ ಕ್ರಮಗಳನ್ನು ಅನುಸರಿಸಬೇಕು. ದಿನವೂ ಕಾಲೇಜಿನಲ್ಲಿ ಸಂಶೋಧನೆಗಾಗಿ ವಿಷದ ರಾಸಾಯನಿಕಗಳನ್ನು ಬಳಸುವ ಪ್ರಾಧ್ಯಾಪಕನಿಗೆ ಮಾರಕ ರಕ್ತಕೊರೆ ಆಗಬಹುದು. ತೆಗೆದ ಚಿತ್ರಗಳನ್ನು ಕತ್ತಲೆ ಕೋಣೆಯಲ್ಲಿ ರಾಸಾಯನಿಕಗಳಲ್ಲಿ ಅದ್ದಿ ತೊಳೆವ ಭಾವಚಿತ್ರಗಾರನ ಬೆರಳುಗಳು ಸುಟ್ಟಂತಾಗಬಹುದು.

	ಕೃತಕ ಬಣ್ಣಗಳ ಕೈಗಾರಿಕೆ ನಮ್ಮಲ್ಲಿ ಅಗಾಧವಾಗಿ ಬೆಳೆಯುತ್ತಿದೆ. ಇವುಗಳ ತಯಾರಿಕೆಯಲ್ಲಿ ಬಲು ಮುಖ್ಯವಾಗಿ ಬಳಸುವ ರಾಸಾಯನಿಕ ಬೆಂಜಾಂತ್ರೋನ್ ಕೆಡುಕಿನದೆಂದು ತಿಳಿದಿದೆ. ನಿರೋಧಕ ಉಪಾಯಗಳನ್ನು ಹುಡುಕಲಾಗುತ್ತಿದೆ. ಸೀಸದ ಆಕ್ಸೈಡುಗಳು, ಕಾರ್ಬೊನೇಟುಗಳು, ಪೆಟ್ರೋಲಿನಲ್ಲಿ ಸೇರಿಸುವ ಟೆಟ್ರಯೆತಿಲ್ ಲೆಡ್ ಇವೆಲ್ಲ ಮೈ ಒಳಸೇರಿದರೆ ರಕ್ತಕೊರೆಯಾಗಿ ಸ್ನಾಯುಗಳ ನರಗಳಿಗೆ ಕೆಡುಕು. ಬಿಳಿಬಣ್ಣ ತಯಾರಕರು, ವಿದ್ಯುತ್ಕೋಶ ಜಾಲ (ಬ್ಯಾಟರಿ) ತಯಾರಕರು, ಸೀಸ ಕರಗಿಸುವವರು, ಬಣ್ಣ ಸಿಂಪಡಿಸುವವರು, ಬಣ್ಣ ತೆಗೆವವರು-ಇವರಲ್ಲೆಲ್ಲ ಬಹುಮಟ್ಟಿಗೆ ಸೀಸದ ಆವಿಯನ್ನು ಉಸಿರಲ್ಲಿ ಸೇದಿಕೊಳ್ಳುವುದರಿಂದ ಸೀಸದ ವಿಷವೇರಬಹುದು. ಆವರಣದಲ್ಲಿ ಚೆನ್ನಾಗಿ ಗಾಳಿ ಆಡುವಂತಿದ್ದರೆ ಕೆಡುಕಿಲ್ಲ. ರೋಗಿಗೇ ಗೊತ್ತಾಗದಷ್ಟು ನಿಧಾನವಾಗಿ ವಿಷವೇರುವುದರಿಂದ, ಕೆಲಸಗಾರರ ಮೈಯಲ್ಲಿನ ಸೀಸದ ಪ್ರಮಾಣ, ರಕ್ತಕೊರೆ ಪರೀಕ್ಷೆಗಳಿಂದ ಈ ವಿಷತೆಯನ್ನು ಗುರುತಿಸಬಹುದು. ಕ್ಯಾಡ್ಮಿಯಂ ವಿಷವೇರಿಕೆ ಕೂಡ ಸೀಸದ್ದರಂತೆಯೇ ಇರುವುದು. ಸೀಸದ ವಿಷವೇರಿಕೆಗೆ ಚಿಕಿತ್ಸೆ, ಮದ್ದುಗಳಿವೆ (ನೋಡಿ- ಸೀಸದ-ವಿಷವೇರಿಕೆ). ಇದೇ ತೆರನಾಗಿ ಪಾದರಸ, ರಂಜಕ ಮುಂತಾದುವುಗಳ ವಿಷವೇರಿಕೆಯ ನಿರೋಧಗಳೂ ಇವೆ. ಹಿತ್ತಾಳೆಯಲ್ಲಿನ ಸತುವಿನ ದೂಳನ್ನು ಉಸಿರಲ್ಲಿ ಸೇದಿಕೊಳ್ಳುವುದರಿಂದ, ಹಿತ್ತಾಳೆ, ಕಂಚುಗಾರರ ಬೇನೆ ಆಗುತ್ತದೆ. ಎದೆಯೆಲ್ಲ ಬಿಗುವಾಗಿ ಅಮುಕಿ ಒತ್ತಿದಂತಾಗಿ ನಡುಕ, ಬೆವರಿಕೆ ಆಗುತ್ತವೆ.

	ವಿಷಕರ ರಾಸಾಯನಿಕಗಳು ತಾಕುವ ವೃತ್ತಿಗಳು ಮುಖ್ಯವಾಗಿ ಸೀಸ, ಬೆರಿಲಿಯಂ, ಕ್ರೋಮಿಯಂ, ಮ್ಯಾಂಗನೀಸ್, ಪಾದರಸ ಹಾಗೂ ಯುರೇನಿಯಂ ಕೈಗಾರಿಕೆಗಳವು. ಭಾರತದಲ್ಲಿ ಅಗಾಧವಾಗಿರುವ ಮ್ಯಾಂಗನೀಸ್ ಅದುರಿನ ಗಣಿಯ ಕೆಲಸಗಾರರಲ್ಲಿ ಮಿದುಳು, ನರಗಳ ಬೇನೆ ಆಗುವುದು. ಈಚೆಗೆ ಕಂಡು ಹಿಡಿದ ಬೆರಿಲಿಯಂ ಸಂಯುಕ್ತಗಳಿಂದ ತಯಾರಿಸಿದ ಸೂಸುಮಿರುಗುವ (ಫ್ಲೂರೆಸೆಂಟ್) ಅಂಡೆದೀಪಗಳ, ಅವುಗಳ ಬೆರಕೆಲೋಹದಿಂದ ನೂರಾರು ಹಗುರ ವಸ್ತುಗಳ ತಯಾರಿಕೆಯ ಕೆಲಸಗಾರರಲ್ಲಿ ಒಂದು ತೆರನ ಪುಪ್ಪುಸ ಉರಿತವಾಗಿ ಕೊನೆಗೆ ಕ್ಷಯದಂತೆ ಕೂಡ ಕಂಡ ಮೇಲೆ ಬೆರಿಲಿಯಂ ಬದಲು ಬೇರೆ ಬಳಸಬೇಕಾಯಿತು. ಗಿಡಮರಗಳ ಬೆಳೆಗಳಿಗಾಗಿ ಸಿಂಪಡಿಸುವ ಕೀಟನಾಶಕಗಳ ತಯಾರಕರಲ್ಲೂ ಅವನ್ನು ಹೊಲ ತೋಟಗಳಲ್ಲಿ ಸಿಂಪಡಿಸುವವರಲ್ಲೂ ಕೆಡುಕಾಗಿದೆ. ಬಹುಮಟ್ಟಿಗೆ ಇವೆಲ್ಲ ಟಿಕ್-20, ಫಾಲಿಡಾಲ್ಗಳಂತೆ ಸಮ್ಮಿಶ್ರ ರಂಜಕದ ಸಂಯುಕ್ತಗಳೇ. ಉಸಿರಲ್ಲಿ ಒಳಹೋಗುವುದರೊಂದಿಗೆ ಇವು ಲೋಳೆಪೊರೆ, ಚರ್ಮಗಳ ಮೂಲಕವೂ ಸುಲಭವಾಗಿ ಒಳಸೇರುವುದೇ ಬಲೂ ಬಲು ಅಪಾಯಕರ. ಕಲ್ಲು, ಕಲ್ಲಿದ್ದಲಿನ ಗಣಿಗಳಲ್ಲಿನ ಸಾವುಗಳ ಸುಮಾರು ಹತ್ತರಷ್ಟು ಇರುವ, ತವರದ ಗಣಿ ಕೆಲಸ ತೀರ ಕೆಡುಕಿನದು. ಬಲು ಮೊನಚುಮೂತಿಯ, ಚುಚ್ಚುವ, ಕಲ್ಲಿನ ದೂಳು ಚೂರುಗಳಿಂದ ಅಪಾಯವಿದೆ.

	ಇವುಗಳ ಕೆಡುಕನ್ನು ತಡೆಯಲು ಮೊದಲಾಗಿ, ಕೆಲಸಗಾರರಿಗೆ ಈ ರಾಸಾಯನಿಕಗಳು ಆದಷ್ಟು ತಾಕದಂತೆ ನೋಡಿಕೊಳ್ಳಬೇಕು. ಸಾಕಷ್ಟು ಗಾಳಿಯಾಡುವ ಕಿಟಕಿಗಳು, ಕಂಡಿಗಳು, ಗಾಳಿ ಹೊರಕಳೆವ ಪಂಕಗಳಿಂದ ಆವರಣದಲ್ಲಿ ವಿಷಕರ ರಾಸಾಯನಿಕವಿಲ್ಲದಂತೆ ಇರಿಸುವ ಏರ್ಪಾಟುಗಳಿರಬೇಕು. ಕೆಡುಕಿನ ವಸ್ತುಗಳನ್ನು ಕೂಡುಹಾಕಿ ಪರಿಣತರ ಸಲಹೆಯಂತೆ ಅವುಗಳ ವಿಲೇವಾರಿ ಮಾಡಬೇಕು. ಕೆಲಸಗಾರರಿಗೆ ತೊಡುಗೆ, ತೊಳೆತ, ಸ್ನಾನ, ಊಟದ ಮಂದಿರಗಳು, ಪುಷ್ಟಿಕರ ಆಹಾರ-ಇವುಗಳ ಅನುಕೂಲತೆಗಳಿರಬೇಕು. ವಿಷಕರ ದೂಳು, ಆವಿ ಇರುವೆಡೆ ಯಾರೂ ಊಟ, ತಿಂಡಿ ತಿನ್ನಬಾರದು. ಪೂರ್ಣ ವೈದ್ಯಪರೀಕ್ಷೆ ಆದ ಮೇಲೆ ಕೆಲಸಗಾರರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದೇ ಅಲ್ಲದೆ ಆಗಾಗ್ಗೆ ಪರೀಕ್ಷಿಸಿ ರೋಗದ ಲಕ್ಷಣಗಳನ್ನು ಎಳೆಯದರಲ್ಲಿ ಕಂಡುಕೊಂಡು ತಕ್ಕ ಚಿಕಿತ್ಸೆ ಮಾಡಿಸಬೇಕು. ಹಾಗೂ ಅವರನ್ನು ಕೆಡುಕಿನ ರಾಸಾಯನಿಕಗಳು ತಾಕದ ಕೆಲಸಗಳಿಗೆ ಬದಲಿಸಬೇಕು. ದಣಿವು, ಮದ್ಯಪಾನಗಳಿಂದ ಅಪಘಾತಗಳು ಹೆಚ್ಚುತ್ತವಲ್ಲದೆ ಕೆಲವು ಕೈಗಾರಿಕೆಗಳ ವಿಷಗಳಿಗೆ ಸುಲಭವಾಗಿ ಈಡಾಗುವುದೂ ಹೆಚ್ಚುವುದು.

	ಕೆಡುಕಿನ ದೂಳುಗಳು: ದೂಳಿನಿಂದ ಕೆಡುಕಾಗುವುದು ಗೊತ್ತಿದ್ದರೂ ಎಂಥ ದೂಳು ಬಲು ಕೆಡುಕಿನದೆಂದು ಎಲ್ಲರಿಗೂ ಗೊತ್ತಿಲ್ಲ. ಏಕೆಂದರೆ, ತೀರ ಕೆಡುಕಿನದರ ಎದುರಾಗಿ ಹೆಚ್ಚು ಎಚ್ಚರದಿಂದ ಇರಬೇಕಾಗುತ್ತದೆ. ಭಾರತದಲ್ಲಿ ಕಲ್ಲಿದ್ದಲು ಸಾಗಣೆ, ಕಲ್ನಾರು, ಸಿಮೆಂಟು ಮುಂತಾದ ಕಾರ್ಖಾನೆಗಳಲ್ಲಿ ಸುಮಾರು 7,50,000 ಕೆಲಸಗಾರರು ದೂಳಿಗೆ ಈಡಾಗುವರು. ದೂಳಿನಿಂದ ಕೆಡುಕಾಗಲು ಅದು ಬಲು ನವುರೂ ನುಣುಪೂ ಆಗಿರಬೇಕು. ದಪ್ಪ ಕಣಗಳನ್ನು ಮೂಗಿನ ಕೂದಲುಗಳೇ ತಡೆಯುತ್ತವೆ. ಕಲ್ಲು, ಕಲ್ಲನಾರು, ಹತ್ತಿಕಾಳು ಇವುಗಳಿಂದೇಳುವ ದೂಳುಗಳು ಮುಖ್ಯವಾದುವು. ಎಷ್ಟೋ ಕಾಲದಿಂದಲೂ ಎದೆಯಲ್ಲಿ ದೂಳು ನೆಲೆಸಿದಾಗ ತೋರಿಬರುವ ರೋಗಕ್ಕೆ ಪುಪ್ಪುಸದೂಳುಬೇನೆ ಎಂದಿದೆ. ಗಣಿ ಕೆಲಸಗಾರರು, ಮರಳು ಸಿಡಿಸುವವರು, ಕಲ್ಲುಬಂಡೆ ಎಬ್ಬಿಸುವವರು, ಕಲ್ಲುಕೊರೆಗರು, ಕಲ್ಕುಟಿಗರು, ಕಲ್ಲುದೂಳನ್ನು ಅಂದರೆ ಸಿಲಿಕವನ್ನು ಉಸಿರಲ್ಲಿ ಸೇದಿಕೊಳ್ಳುತ್ತಾರೆ. ಬಹುಮಟ್ಟಿಗೆ ಇದರಿಂದ ಸಿಲಿಕಬೇನೆ (ಸಿಲಿಕೋಸಿಸ್) ಆಗುವುದು (ನೋಡಿ- ಸಿಲಿಕಾಬೇನೆ). ನುಣುಪಾದ ಸಿಲಿಕ ದೂಳು ಪುಪ್ಪುಸಗಳಲ್ಲಿ ಸೇರಿ, ಉರಿತ ಎಬ್ಬಿಸುವುದರಿಂದ ಕಿಗ್ಗಂಟುಗಳು ಆಗುತ್ತವೆ. ಮುಂದೆ ಕ್ಷಯಕ್ಕೆ ಈಡಾಗುವುದೂ ಉಂಟು. ದೂಳೇ ಇಲ್ಲದಂತಾದರೆ ಈ ಬೇನೆಯಿಲ್ಲ. ಆದರೆ ಆಳದ ಗಣಿಯಲ್ಲಿ ಹೀಗೆ ಮಾಡುವುದಾಗದು. ಕಲ್ನಾರಿನ (ಮೆಗ್ನೀಷಿಯಂ, ಕಬ್ಬಿಣಗಳ ಸಿಲಿಕೇಟುಗಳ ಸಂಯುಕ್ತ) ಕೆಲಸಗಾರರಿಗೆ ಪುಪ್ಪುಸದ ಕಲ್ನಾರುಬೇನೆ (ಆಸ್ಬೆಸ್ಟೋಸಿಸ್) ಬರುವುದು. ಕಲ್ನಾರು ಬೇನೆಯವರು ಪುಪ್ಪುಸದ ಏಡಿಗಂತಿಗೆ ಈಡಾಗಬಲ್ಲರು.

	60 ವರ್ಷಗಳ ಕೆಳಗೆ ಇಂಗ್ಲೆಂಡಿನಲ್ಲಿ ತೀರ ಸಾಮಾನ್ಯವಾಗಿದ್ದ ಕಲ್ಲಿದ್ದಲ ಗಣಿಕಾರರ ಕ್ಷಯವೆಂಬ ಪುಪ್ಪುಸದ ಇದ್ದಲಬೇನೆ (ಅಂತ್ರಕೋಸಿಸ್) ಈಗ ಗಣಿಯಲ್ಲಿ ಗಾಳಿಯಾಟ ಚೆನ್ನಾದ ಮೇಲೆ ತಗ್ಗಿದೆ. ಈ ಬೇನೆಯವರಿಗೆ ಕ್ಷಯ ಹತ್ತುವುದು ಬಲು ಅಪೂರ್ವ. ಆದರೆ ಪುಪ್ಪುಸದ ಬೇರೆ ಕಾಯಿಲೆಗಳಿಗೆ ಗುರಿಯಾಗುವವರು. ಗಿರಣಿಗಳಲ್ಲಿ ಹತ್ತಿ ಹಿಂಜುವಾಗ ಏಳುವ ದೂಳಿನಿಂದ ಗಿರಣಿ ಜ್ವರ, ಅರಳೆಬೇನೆ (ಬಿಸ್ಸಿನೋಸಿಸ್), ನೇಕಾರನ ಕೆಮ್ಮು ಬರಬಹುದು. ಇವಿಷ್ಟೇ ಅಲ್ಲದೆ, ಕೆಲವು ಒಗ್ಗದಿಕೆಯ (ಅಲರ್ಜಿಕ್) ರೋಗಗಳೂ ಇರಬಹುದು.

	ಗಾಳಿಯಲ್ಲಿ ದೂಳು ತೇಲಾಡಬಿಡದಂತೆ ನೀರಿಂದ ನೆನೆಸಿ, ಕೆಲಸದೆಡೆಗಳಲ್ಲಿ ಅಡೆ ತಡೆಗಳಿರದೆ ಸರಾಗವಾಗಿ ಆಡುತ್ತಿರುವಂತೆ ಅಲ್ಲಿಯ ಗಾಳಿಯನ್ನು ಸೆಳೆದು ಹೊರ ತಳ್ಳುವ ಸಾಧನಗಳನ್ನೂ ಅಪಾಯಕರ ಆವರಣದ ಕೆಲಸಗಾರರಿಗೆ ಒಳ್ಳೆಯ ಗಾಳಿ ದೊರೆವಂತೆ ಕೃತಕ ಉಸಿರಾಟಿಕಗಳನ್ನೂ ಒದಗಿಸುವುದು, ಆಗಾಗ್ಗೆ ವ್ಯೆದ್ಯ ಪರೀಕ್ಷೆ ಮಾಡುವುದು-ಇವೇ ಈ ರೋಗಗಳ ಪರಿಹಾರೋಪಾಯ. ರೋಗಿ ಕೆಲಸಗಾರನನ್ನು ಕೆಲಸದಿಂದ ಬಿಡಿಸಬೇಕಾಗಬಹುದು.

	ಏಕಾಣುಜೀವಿಕ ಕಾರಕಗಳು: ಕೆಲವು ಉದ್ಯೋಗಗಳಲ್ಲಿ ಕೆಲಸಗಾರರಿಗೆ ಏಕಾಣುಜೀವಿಗಳು ತಾಕುವ ಸಂಭವವಿದೆ. ದನ, ಕುರಿ, ಮೇಕೆ, ಕುದುರೆಗಳಿಗೆ ಬರುವ ರೋಗ ನೆರಡಿ. ಈ ರೊಗದ ಪ್ರಾಣಿಯ ಜೊಲ್ಲು, ಸಗಣಿಗಳಲ್ಲಿ ರೋಗಾಣುಗಳು ಇರುವುವು. ಕಟುಕರು. ಚರ್ಮ ಹದಕಾರರು, ತೊಗಲು ತುಪ್ಪಟಗಳನ್ನು ಕೂಡಹಾಕಿ ಕೆಲಸ ಮಾಡುವವರಿಗೂ ನೆರಡಿ ಅಂಟಬಹುದು. ಇದೇ ರೀತಿ ಬ್ರೂಸೆಲ್ಲಬೇನೆ (ಬ್ರೂಸೆಲ್ಲೋಸಿಸ್), ಮಾಲ್ಟಾ ಜ್ವರ, ಕೆಲವು ಗಿಡಮರ ಸಂಬಂಧದ ಅಣಬೆ (ಬೂಷ್ಟು) ರೋಗಗಳೂ ಬರುತ್ತವೆ. ಮೊದಲಿನ ಎರಡೂ ಬ್ರೂಸೆಲ್ಲ ಏಕಾಣುಜೀವಿಯಿಂದಾಗಿ ಮೇಕೆ, ದನ, ಹಂದಿಗಳಲ್ಲಿ ತಲೆದೋರಿ, ಅವುಗಳ ಮಾಂಸ, ಮೂತ್ರ, ರಕ್ತ, ಹಾಲು, ಬೆಣ್ಣೆಗಿಣ್ಣುಗಳ ಮೂಲಕ ಮಾನವನಿಗೆ ಸಾಗುತ್ತವೆ. ಆದ್ದರಿಂದ ಭಾರತದ ಮಧ್ಯಪ್ರದೇಶದಲ್ಲಿದ್ದಂತೆ ಮೇಕೆ, ಕುರಿ, ದನ, ಹಂದಿ ಸಾಕುವವರಲ್ಲಿ ಕಾಣಿಸಿಕೊಳ್ಳಬಹುದು. ಚೆನ್ನಾಗಿ ಕುದಿಸಿಯೋ ಉಕ್ಕಾರಿಸಿಯೋ (ಪ್ಯಾಶ್ಚುರೀಕರಣ) ಹಾಲನ್ನು ಕುಡಿಯುವುದು, ರೋಗದ ಅನುಮಾನವಿರುವ ಪ್ರಾಣಿಗಳನ್ನು ಬೇರ್ಪಡಿಸಿ ಕೊಂದು ಸರಿಯಾದ ವಿಲೇವಾರಿ ಮಾಡುವುದು (ಸುಡುವುದು ಇತ್ಯಾದಿ), ಕೆಲಸಗಾರರಿಗೆ ಸರಿಯಾದ ತಿಳಿವಳಿಕೆ ಕೊಡುವುದು, ಪ್ರಾಣಿಗಳಿಗೆ ರೋಗ ಹತ್ತದಂತೆ ಚುಚ್ಚುಮದ್ದು ಕೊಡುವುದೇ ಮೊದಲಾದ ಮುನ್ನೆಚ್ಚರಗಳ್ನು ಕೈಗೊಳ್ಳಬೇಕು.

	ಭೌತಿಕ ಕಾರಕಗಳು: ಈ ವಿಜ್ಞಾನ ಯುಗದಲ್ಲಿ ವಿದ್ಯುತ್ ವಿಕಿರಣತೆಯಿಂದ ತಯಾರಿಸಿದ ಸಮಸ್ಥಾನಿಗಳಿಂದ (ಐಸೊಟೋಪ್ಸ್) ವೈದ್ಯ, ಕೈಗಾರಿಕ, ಬೇಸಾಯದ ಕ್ಷೇತ್ರಗಳಲ್ಲಿ ಬೆರಗುಗೊಳಿಕ ಮುನ್ನಡೆಯಾಗಿದೆ. ಅಲ್ಲಿನ ಕೆಲಸಗಾರರಿಗೆ ವಿದ್ಯುತ್ ವಿಕಿರಣತೆ ತಾಕುತ್ತಲೇ ಇರುವುದು. 1930ಕ್ಕೂ ಹಿಂದೆ, ಸಾಕಷ್ಟು ತಿಳಿವಿರದೆ, ನೂರಾರು ಕೆಲಸಗಾರರು ರೇಡಿಯಂ ತಾಕಿ ಅಸು ನೀಗಿದರು. ಅಮೆರಿಕದ ಗಡಿಯಾರದ ಕಾರ್ಖಾನೆಗಳಲ್ಲಿ, ಮೀಸೊ ತೋರಿಯಂ, ರೇಡಿಯಂ ಲವಣಗಳಿದ್ದ, ಕತ್ತಲಲ್ಲಿ ಮಿನುಗುವ ರೇಡಿಯಂ ಬಣ್ಣವನ್ನು ಹಚ್ಚುತ್ತಿದ್ದ ಹೆಣ್ಣಾಳುಗಳ ಮೂಳೆಗಳು ಕೊಳೆತು ಮಾರಕ ರಕ್ತ ಕೊರೆ, ಎಲುಬಿನ ಏಡಿಗಂತಿಗಳಿಗೆ ತುತ್ತಾದರು. ಬಣ್ಣ ಹಚ್ಚುವ ಕುಂಚಗಳನ್ನು ಎಂಜಲಿಂದ ಒದ್ದೆ ಮಾಡುತ್ತಿದ್ದುದರಿಂದ ಹೀಗಾಯಿತು. ಯೂರೋಪಿನ ಕೆಲಸಗಾರರಿಗೆ ಎಂಜಲು ಮಾಡಬಾರದೆಂದು ಮೊದಲೇ ಎಚ್ಚರಿಸಿದ್ದರಿಂದ ಅವರಾರೂ ಹೀಗೆ ಸಾಯಲಿಲ್ಲ. ಇತ್ತೀಚೆಗೆ, ರೇಡಿಯಂ ಬಳಸುವ ಉದ್ಯೋಗಗಳು ಹೆಚ್ಚಿವೆ. ಬಟ್ಟೆ ನೇಯಿಗೆಯಲ್ಲೂ, ಕಾಗದ ಕಾರ್ಖಾನೆಗಳಲ್ಲೂ ಒಂದಲ್ಲ ಒಂದು ಬಗೆಯ ರೇಡಿಯಂ ಬಳಕೆಯಲ್ಲಿದೆ.

	ವಿಕಿರಣಿಕ ಅದುರನ್ನು ತೆಗೆವ ಗಣಿಕೆಲಸಗಾರರು ವಿಕಿರಣತೆಗೆ ಹೆಚ್ಚಾಗಿ ಮೈಯೊಡ್ಡುವುದರಿಂದ ಇನ್ನೂ ಅಪಾಯಕರ. ವಿಕಿರಣಶಕ್ತ ಕೊಬಾಲ್ಟ್ ಆರ್ಸಿನೈಡ್ ಅದುರನ್ನು ತೆಗೆವ ಷ್ನಿಬರ್ಗ್ (ಜರ್ಮನಿ) ಗಣಿಕೆಲಸಗಾರರಲ್ಲಿ ಅನೇಕರಿಗೆ ಪುಪ್ಪುಸದ ಏಡಿಗಂತಿಗಳು ಎದ್ದಿವೆ. ಈ ಏಡಿಗಂತಿ ಏಳುವುದು 1878ರಲ್ಲಿ ಮೊದಲು ಗೊತ್ತಾದರೂ ಹಾಗೆಂದು ರುಜುವಾತಾದುದು 1913ರಲ್ಲಿ; ಮತ್ತೆ ಖಚಿತವಾದುದು 1926ರ ಹೊತ್ತಿಗೆ. ಈ ಅಪಾಯವನ್ನು ತಡೆವುದು ತೀರ ಕಷ್ಟ. ಕೆಲಸಗಾರರಿಗೆ ತಾಕುವ ವಿಕಿರಣತೆಯ ಪ್ರಮಾಣವನ್ನು ಗುರುತಿಸಲು, ಹಲಬಗೆಗಳ ವಿಕಿರಣ ಚಟುವಟಿಕೆಯನ್ನು ಅಳೆವ ಸಲಕರಣೆಗಳು ಬಳಕೆಯಲ್ಲಿವೆ: ಗೀಗರ್-ಮುಲ್ಲರ್ ಎನಿಕ (ಕೌಂಟರ್), ಕೊಡುಗೆಮಾಪಕ (ಡೋಸಿಮೀಟರ್), ಪಟಲ ಪದಕ (ಫಿಲ್ಮ್ ಬ್ಯಾಡ್ಜ್) ಇತ್ಯಾದಿ. ಕೆಲಸಗಾರ ಬಿಟ್ಟ ಉಸಿರಲ್ಲಿನ ರೇಡಾನ್ ಆನಿಲದ ಮಟ್ಟದಿಂದ ಮೈಯಲ್ಲಿನ ಒಟ್ಟು ರೇಡಿಯಂ ಪ್ರಮಾಣ ತಿಳಿಯುತ್ತದೆ. ಕೆಲಸಗಾರ ಬದುಕಿರುವ ತನಕ ದುಡಿದರೂ ಕೆಡಕು ಮಾಡದ ವಿಕಿರಣತೆಯ ಒಪ್ಪ ಬಹುದಾದ ಪ್ರಮಾಣದ ಮಟ್ಟ ನಿರ್ಧರವಾಗಿದೆ.

	ಕ್ಷ-ಕಿರಣಗಳು ವೈದ್ಯದಲ್ಲೂ ಕೈಗಾರಿಕೆಗಳಲ್ಲೂ ಹೆಚ್ಚು ಬಳಕೆಯಲ್ಲಿವೆ. ಎಷ್ಟು ದಪ್ಪನೆಯ ಪದಾರ್ಥದ ಮೂಲಕ ತೂರಬಿಡಬೇಕು ಎನ್ನುವಂತೆ, ಈ ಕಿರಣಗಳ ಶಕ್ತಿ ಇರುತ್ತದೆ. ರಬ್ಬರ್ ಅಟ್ಟೆಗಳಲ್ಲಿ ಲೋಹದ ತಗಡು ಇರುವ ತಾವನ್ನು ಕಾಣಲು ಮೆತು ಕಿರಣಗಳು ಸಾಕಾಗುವುದಾದರು ಲೋಹಗಳ ಎರಕಗಳಲ್ಲಿನ ಒಡಕು, ಬಿರುಕುಗಳನ್ನು ಕಾಣಿಸಲು ಗಡುಸಾದ ಕಿರಣಗಳೇ ಬೇಕು. ಇಷ್ಟಾದರೂ ಆಸ್ಪತ್ರೆ ವೈದ್ಯವೃತ್ತಿಯಲ್ಲಿ ಇವುಗಳ ಅಪಾಯ ಅಗಾಧವಾಗಿತ್ತು. ಮರೆಮಾಡುವ ತಕ್ಕ ಸಾಧನ, ಏರ್ಪಾಟುಗಳಿಂದ ಇದೀಗ ತಗ್ಗಿದೆ. ಮುಂದಿರುವ ಮೂಳೆಗಳ್ನು ಕ್ಷ-ಕಿರಣಗಳ ಅಡಿಯಲ್ಲಿ ಬಹಳ ಹೊತ್ತು ಕೈಯಾಡಿಸಿ ಸರಿಪಡಿಸುವ ಶಸ್ತ್ರವೈದ್ಯ, ರೋಗಿ ಮತ್ತಿತರರಿಗೂ ಈ ಕಿರಣಗಳಿಂದ ಅಪಾಯಕರ ಎಂಬುದನ್ನು ಮರೆವುದು ಸಾಮಾನ್ಯ. ಹೀಗೇ ವಿಕಿರಣ ಪಟುಗಳು ಕೂಡ ತಕ್ಕ ಕಾಪುಕವಚ ಬಳಸದಿದ್ದಲ್ಲಿ ಬಿಳಿಕಣರಕ್ತತೆಯಿಂದ (ಲುಕೀಮಿಯ) ನರಳುವರು. ಈ ಕೆಲಸಗಾರರ ಆಗಾಗಿನ ವೈದ್ಯಪರೀಕ್ಷೆ ಬಲು ಮುಖ್ಯ. ರಕ್ತ, ಕಣ್ಣು ಇತ್ಯಾದಿಗಳ ಪರೀಕ್ಷೆಗಳನ್ನು ಕಡ್ಡಾಯಪಡಿಸಬೇಕು. ಸಂಶೋಧಕರೂ ಕೈಗಾರಿಕೆಯಲ್ಲಿನವರೂ ವಿಕಿರಣತೆಗೆ ಈಡಾಗುವರು. ಸೀಸಗೂಡಿಸುವ ಗಾಜಿನ ಕನ್ನಡಕ, ಮುಂಗವಚ, ಕೈಗವುಸು ಇತ್ಯಾದಿಗಳಿಂದ ಇವರನ್ನು ಕಾಪಿಡಲು ತಿಳಿಸುವುದೇ ಅಲ್ಲದೆ ಒತ್ತಾಯವೂ ಇದೆ. ಸೇನೆಯ ಚಟುವಟಿಕೆಗಳಲ್ಲಿ ದೂರದ ಘನವಸ್ತುಗಳ ನೆಲೆ ಹಿಡಿಯಲು ಕ್ಲಿಸ್ ಟ್ರಾನ್ ಎಂಬ ಕ್ಷ-ಕಿರಣ ಸೂಸುವ ಹೆಚ್ಚು ವೋಲ್ಟಿನ ರಾಡಾರ್ ಉಪಕರಣ ಬಳಕೆಯಲ್ಲಿದೆ. ಈ ಕಿರಣಗಳಿಂದ ಕಾವು ಹುಟ್ಟುವುದು ಮಾತ್ರ ಗೊತ್ತಿದೆ. 

	ಭೂಮಿಯ ಸುತ್ತಣ ಆಕಾಶಯಾನದಲ್ಲಿ ಗುರುತ್ವದ ಸೆಳೆತವಿರದೆ ಮೈ ಉಜ್ಜಾಟದ ತೊಡಕುಗಳಾಗಿ, ಮೈ ಕಾವು ಏರುಪೇರಾಗುತ್ತದೆ. ಗೊತ್ತಿದ್ದುದಕ್ಕಿಂತ ಹೆಚ್ಚು ವಿದ್ಯುತ್ ವಿಕಿರಣತೆ ಭೂಮಿಯ ಸುತ್ತಣ ಆವರಣಗಳಲ್ಲಿ ಇರುವುದು ಈಗ ಖಚಿತವಾಗಿದೆ. ಇದರ ತಿಳಿವೂ ನಮಗೆ ಸಾಲದು.

	ಹಿಮಾಲಯದಂಥ ಪರ್ವತಗಳಲ್ಲಿ ಬೇಗಬೇಗನೆ ಎತ್ತರಕ್ಕೆ ಏರಿ ಹೋಗುವವರಲ್ಲಿ ಸಾಮಾನು ಹೊರುವವರಲ್ಲಿ ಪರ್ವತದ ನರಳಿಕೆ (ಮೌಂಟನ್ ಸಿಕ್ ನೆಸ್) ಆಗುತ್ತದೆ. ತಲೆನೋವು, ವಾಂತಿ, ಸುಸ್ತು, ತಲೆತಿರುಗು, ಕೆಲವೇಳೆ ಅದಿರುಗಣ್ಣಾಗಿ ಬವಳಿ ಬರುವುದೂ ಉಂಟು. ನಿಧಾನವಾಗಿ ಮೇಲೇರುವುದೇ ಇದರ ಉಪಾಯ. ಬಲು ಹೆಚ್ಚಿನ ಗಾಳಿ ಆವರಣದ ಒತ್ತಡಗಳಿಗೆ ಈಡಾಗುವವರು, ಮುಳುಗುವವರು ಮತ್ತಿತರ ಕೆಲಸಗಾರರಲ್ಲಿ ಕಾಣಬರುವ, ಒತ್ತುಕಳೆವ ಬೇನೆಯಾದ ಹದಿಗೂಡಿನ ರೋಗವನ್ನು ಬೇರೆಯಾಗಿ ಕೊಟ್ಟಿದೆ.	
										(ಆರ್.ಎಸ್.ವಿ.; ಸಿ.ಸಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ